ಮೂಳೆ ಸವೆತ ತಡೆಯಲು ಹುಳಿ ಸೇವನೆಯ ಮೇಲೆ ನಿಯಂತ್ರಣ ಇರಲಿ

🙏🏼  ಅಮೃತಾತ್ಮರೇ ನಮಸ್ಕಾರ  🙏🏼

  🍁 ಮೂಳೆ ಸವೆತ ತಡೆಯಲು ಹುಳಿ ಸೇವನೆಯ ಮೇಲೆ ನಿಯಂತ್ರಣ ಇರಲಿ 🍁
•••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 747, ದಿನಾಂಕ: 27.08.2023
•••••••••••••••••••••••••••••••••••••••••••••
  ದೃಢವಾಗಿ ಇರಬೇಕಾದ ಹದಿಹರೆಯದವರಲ್ಲೂ ಸಹ ಸಣ್ಣ ಪೆಟ್ಟಿಗೆ ಮೂಳೆಗಳು ಮುರಿಯುತ್ತಿವೆ! 🤔

  ಎಷ್ಟೇ ಕ್ಯಾಲ್ಸಿಯಂ ಯುಕ್ತ ಆಹಾರ ಸೇವಿಸಿದರೂ, ಕ್ಯಾಲ್ಸಿಯಂ ಮಾತ್ರೆ ಸೇವಿಸಿದರೂ ಮೂಳೆ ಸವೆತ ರೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ!

  ಇದಕ್ಕೆ ಕಾರಣ  ಕಂಡುಹುಡುಕುವುದು ಪರಿಹಾರದ ಮೊದಲ ಹೆಜ್ಜೆ. ನಂತರ ಮೂಳೆ ಶಕ್ತಿ ವರ್ಧಿಸುವುದು ಎರಡನೇ ಹೆಜ್ಜೆ.

ಮೂಳೆ ಸವೆತ ಹೆಚ್ಚಲು ಕಾರಣವೇನು?

  ನೀರಿನಲ್ಲಿ ನೆನೆಸಿ ಇಟ್ಟ ಮೂಳೆ ಎಷ್ಟು ಕಾಲವಾದರೂ ಕರಗದು,‌ ಅದೇ ಆ್ಯಸಿಡ್‌ನಲ್ಲಿ ನೆನೆಸಿ ಇಟ್ಟರೆ ಅದು ಕೆಲ ಕ್ಷಣಗಳಲ್ಲಿ ಕರಗಿಹೋಗುವುದು, ಕರಗುವಿಕೆಯ ವೇಗ ಆ್ಯಸಿಡ್‌ನ ತೀವ್ರತೆಯ ಮೇಲೆ ಅವಲಂಬಿತವಾಗಿದೆ.

  ಈಗ ಈ ಶರೀರದೊಳಗೆ ಏನಾಗುತ್ತಿದೆ ಯೋಚಿಸೋಣ...
• ಆಮ್ಲ ಪ್ರಧಾನವಾದ ಆರ್.ಒ. ಜಲ ಸೇವಿಸುತ್ತೇವೆ.
• ನಿರಂತರ ಆ್ಯಸಿಡಿಟಿ ಉಂಟುಮಾಡುವ ಉದ್ದು ಹಾಕಿದ ದೋಸೆ, ಕಲಸನ್ನಗಳು, ಹೆಚ್ಚು ಉಪ್ಪಿನಕಾಯಿ ಹಾಕಿ ಕಲಸಿದ ಅನ್ನ, ಮೈದಾ ತಯಾರಿತ ಬಿಸ್ಕೆಟ್, ಬನ್, ಕೇಕ್, ಬ್ರೆಡ್ ತಿನ್ನುತ್ತೇವೆ.
• ಅತಿಪ್ರಮಾಣದ ಆಹಾರ ಸೇವಿಸುತ್ತೇವೆ.
• ಅಕಾಲದಲ್ಲಿ ತಿನ್ನುತ್ತೇವೆ!
• ಅಕಾಲ ನಿದ್ದೆ ಮಾಡುತ್ತೇವೆ
  ಹೀಗೆ ಇನ್ನೂ ಅನೇಕ ರೀತಿಯಿಂದ ಶರೀರದೊಳಗೆ ಆಮ್ಲೀಯತೆಯನ್ನು ಉಂಟುಮಾಡಿಕೊಳ್ಳುತ್ತೇವೆ.

ಆಮ್ಲೀಯತೆಯಿಂದ ಮೂಳೆಗಳು ಏಕೆ ಸವೆಯುತ್ತವೆ?

  ರಕ್ತವು ಆಮ್ಲೀಯತೆಯನ್ನು ತಡೆದುಕೊಳ್ಳದು, ಅದು ತಕ್ಷಣ ಪ್ರತಿರೋಧ ಒಡ್ಡುತ್ತದೆ. ಉದಾಹರಣೆಗೆ ಹೆಚ್ಚು ಹುಳಿ ತಿಂದಾಗ ಅಥವಾ ಮೇಲೆ ತಿಳಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ತಿಂದಾಗ ಅನೇಕರಿಗೆ ಚರ್ಮದಲ್ಲಿ ಪಿತ್ತಗಂಧೆಗಳು ಏಳುತ್ತವೆ ಅಲ್ಲವೇ? ಇದು ರಕ್ತವು ಹುಳಿಯನ್ನು ತ್ಯಜಿಸುವ ಸಂದೇಶ, ವಾಂತಿಮಾಡಿ ಹುಳಿ ಹೊರತೆಗೆದ ತಕ್ಷಣ 5-10 ನಿಮಿಷಗಳಲ್ಲಿ ಪಿತ್ತಗಂದೆಗಳು ಮಾಯ!!

  ಅದೇ ನಿರಂತರ ತುಸು ಹೆಚ್ಚು ಹುಳಿ ಸೇವನೆ ಮಾಡುವವರಿಗೆ ರಕ್ತ ತಕ್ಷಣ ಪ್ರತಿರೋಧ ಒಡ್ಡುವುದಿಲ್ಲ, ಒಳಗೆ ಸರಿತೂಗಿಸಿಕೊಳ್ಳುತ್ತಾ ಸಾಗುತ್ತದೆ, ಈ ಸರಿತೂಗಿಸಿಕೊಳ್ಳಲು ಅದಕ್ಕೆ ಬೇಕಾಗುವ ಅಂಶ ಎಂದರೆ ಪ್ರತ್ಯಾಮ್ಲ.

  ಪ್ರತ್ಯಾಮ್ಲ ಉಂಟಾಗಲು ಸುಣ್ಣ ಅಥವಾ ಖನಿಜಾಂಶಗಳು ಬೇಕು, ನಮ್ಮ ಶರೀರದಲ್ಲಿ ಸುಣ್ಣ ಮತ್ತು ಇತರ ಖನಿಜಾಂಶಗಳು ಇರುವುದು ಮೂಳೆಗಳಲ್ಲಿ.

  ರಕ್ತ ನಮ್ಮ ಜೀವವನ್ನು ಹಿಡಿದಿಟ್ಟುಕೊಳ್ಳಲು ಆಮ್ಲೀಯತೆಯನ್ನು ಸರಿತೂಗಿಸಿಕೊಂಡು ಅದರ ಪಿ.ಹೆಚ್. 7.4 ಬಂದರಷ್ಟೇ ಸಾಧ್ಯ, ಇಲ್ಲದಿದ್ದರೆ ತಕ್ಷಣ ಸಣ್ಣ ಅಲರ್ಜಿಯಿಂದ ಪ್ರಾಣಾಂತಿಕ ಪ್ರತಿಕ್ರಿಯೆ ತೋರುತ್ತದೆ ನಮ್ಮ ರಕ್ತ.

  ಈಗ ಮೂಳೆಗಳಿಗಿಂತ ಜೀವ ದೊಡ್ಡದು ಹಾಗಾಗಿ, ರಕ್ತವು ಸಹಜವಾಗಿ ಮೂಳೆಯ ಖನಿಜಾಂಶಗಳನ್ನು ಸೆಳೆದುಕೊಂಡು ನಿತ್ಯವೂ ಸಣ್ಣ ಮಟ್ಟದಲ್ಲಿ ಸರಿತೂಗಿಸಿಕೊಳ್ಳುತ್ತಾ ಇರುತ್ತದೆ.

  ಇದೇ ಕೆಲ ವರ್ಷಗಳಲ್ಲಿ ಮೂಳೆ ಸವೆತವನ್ನು ಉಂಟುಮಾಡುತ್ತದೆ! 🤔
•••••••••••••••••••••••••••••••••••••••••••••
ಮೂಳೆ ಸವೆತಕ್ಕೆ ಪರಿಹಾರವೇನು?

  ಮೇಲೆ ಹೇಳಿದ ಕಾರಣಗಳನ್ನು ಅತ್ಯಂತ ತುರ್ತಾಗಿ ಕೈಬಿಡುವುದು ಮೊಟ್ಟ ಮೊದಲ ಕರ್ತವ್ಯ!

  ಆದರೆ, ಆಹಾರ ಜೀರ್ಣವಾಗಲು ಹಿತ ಪ್ರಮಾಣದ ಹುಳಿ ಬೇಕೇಬೇಕು, ಅದನ್ನು ಮೀರಿ ಬಳಸಬಾರದು (ಈಗಾಗಲೇ ಮೂಳೆ ಸವೆತ ಇರುವವರು ಮೂರು ತಿಂಗಳು ಹುಳಿ ಸಂಪೂರ್ಣ ಬಿಡುವುದು ಒಳಿತು).

  ಆರ್.ಒ. ಶೋಧಿತ ಜಲವು ಅತ್ಯಂತ ಪ್ರಮಾದಕರ ಜಲ, ಕುಡಿಯಲು ಅಯೋಗ್ಯ... ಕೇವಲ ಶುಚಿಯ ಸುಳ್ಳು ಪ್ರಚಾರದಲ್ಲಿ ಮತ್ತು ರುಚಿಯ ಕಾರಣವನ್ನು ಮುಂದೊಡ್ಡಿ ಕುಡಿದರೆ ಮೂಳೆ ಸವೆತ ಅತ್ಯಂತ ಅನಿವಾರ್ಯ!!!

ಏನು ಮಾಡಬೇಕು?

  ನಿಯಮಿತ ಪ್ರಮಾಣದ ತುಪ್ಪದ ಅಂಶವನ್ನು ನಿರಂತರ ಬಳಸುವುದು. ಉದ್ದಿನಬೇಳೆ, ಮೆಂತೆಯಿಂದ ತಯಾರಾದ ಪಾಯಸ, ಉಂಡೆಗಳನ್ನೂ ಅತ್ಯಲ್ಪ ಪ್ರಮಾಣದಲ್ಲಿ ಬಳಸಬಹುದು. ಆಹಾರದಿಂದ ಚಪಾತಿಯನ್ನು ಕೈಬಿಟ್ಟು ಸಿದ್ಧಗೋಧಿಯಿಂದ ಹೆಚ್ಚು ನೀರು ಬೆರೆಸಿ ತಯಾರಾದ ಉಪ್ಪಿಟ್ಟು, ಶ್ಯಾವಿಗೆ, ಗೋಧಿ ಪಾಯಸ ಇವುಗಳ ರೂಪದಲ್ಲಿ ಜೀರ್ಣಪ್ರಮಾಣವನ್ನು ಗುರುತಿಸಿ ಹಿತಪ್ರಮಾಣದಲ್ಲಿ ಸೇವಿಸಬಹುದು.

  ಅತ್ಯಂತ ಪ್ರಮುಖ ಅಂಶ ಎಂದರೆ -- ತುಪ್ಪ, ಗೋಧಿ, ಉದ್ದು, ಮೆಂತೆ ಇಂತಹ ಬಲಕಾರಕ ಪದಾರ್ಥಗಳನ್ನು ಸೇವಿಸಿ ಶಾರೀರಿಕ ಕೆಲಸ ಮಾಡದಿದ್ದರೆ ಮೂಳೆಯ ಒಂದಂಶವೂ ಬೆಳೆಯದು. ಅದು ಸ್ಥೂಲ ಶರೀರವನ್ನು ಉಂಟುಮಾಡುತ್ತದೆ. ಇದು ಮೂಳೆ ಸವೆತದ ಇನ್ನೊಂದು ಕಾರಣವಾಗುತ್ತದೆ!

  ಏನು ತಿಂದರೆ ಏನು ಸಿಗುತ್ತದೆ ಎಂಬುದು ಅಪ್ರಾಕೃತಿಕ ಕೇವಲ ಲೆಕ್ಕಾಚಾರ, ಏನನ್ನು ಜೀರ್ಣಿಸಿಕೊಂಡರೆ ಏನು ಸಿಗುತ್ತದೆ ಎಂಬುದು ಮಾತ್ರ ಸತ್ಯ!

  ಆಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ
•••••••••••••••••••••••••••••••••••••••••••••
  ಆಯುರ್ವೇದ ವಿಷಯಗಳ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು.

ಟೆಲಿಗ್ರಾಂ ಲಿಂಕ್:
https://t.me/hospitalfreelife_kan

        🙏🏼  ಧನ್ಯವಾದಗಳು  🙏🏼
•••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು