ಹೃದಯ, ಬುದ್ಧಿಗಳಲ್ಲಿ ಒಂದೇ ವ್ಯಕ್ತಿತ್ವದವರು

🙏🏼   ಅಮೃತಾತ್ಮರೇ ನಮಸ್ಕಾರ   🙏🏼

  🍁 ವೈದ್ಯ ಮತ್ತು ಪರಿಚಾರಕ ಇಬ್ಬರೂ ಹೃದಯ, ಬುದ್ಧಿಗಳಲ್ಲಿ ಒಂದೇ ವ್ಯಕ್ತಿತ್ವದವರು 
•••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 749, ದಿನಾಂಕ: 29.08.2023
•••••••••••••••••••••••••••••••••••••••••••••
  ವೈದ್ಯನಿಗಿರಬೇಕಾದ ನಾಲ್ಕುಗುಣಗಳು:
  ದಕ್ಷಃ ತೀರ್ಥಾತ್ತ ಶಾಸ್ತ್ರಾತ್ತೋ, ದೃಷ್ಟಕರ್ಮ, ಶುಚಿಃ ಭಿಷಕ್ ||

  ಪರಿಚಾರಕನಿಗೆ ಇರಬೇಕಾದ ನಾಲ್ಕು ಗುಣಗಳು:
  ಅನುರಕ್ತಃ ಶುಚಿಃ ದಕ್ಷೋ ಬುದ್ಧಿಮಾನ್ ಪರಿಚಾರಕಃ ||

  'ದಕ್ಷತೆ' ಮತ್ತು 'ಶುಚಿತ್ವ' ಎಂಬ ಎರಡು ಗುಣಗಳನ್ನು ಇಬ್ಬರಿಗೂ ಆಚಾರ್ಯರು ಸಮನಾಗಿ ಹೇಳಿದ್ದಾರೆ.

ದಕ್ಷತೆ:
  ವೈದ್ಯ ತನ್ನ ಜ್ಞಾನದಲ್ಲಿ ದಕ್ಷತೆ ಹೊಂದಿದ್ದರೆ ಮಾತ್ರ ರೋಗವನ್ನು ಗುರುತಿಸಿ ರೋಗಿಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುತ್ತಾನೆ.

  ಅದೇ ರೀತಿ ರೋಗಿಯನ್ನು ನೋಡಿಕೊಳ್ಳುವ ಹತ್ತಿರದ ಪರಿಚಾರಕರು(ಗಂಡ, ಹೆಂಡತಿ, ಅಪ್ಪ, ಅಮ್ಮ, ಮಕ್ಕಳು....) ಸಹ ದಕ್ಷತೆ ಇದ್ದರೆ ಮಾತ್ರ ರೋಗಿಯನ್ನು ಸಕಾಲದಲ್ಲಿ ಉಪಚರಿಸಿ ಗುಣಪಡಿಸಿಕೊಳ್ಳಬಲ್ಲರು, ಉಳಿಸಿಕೊಳ್ಳಬಲ್ಲರು. ವೈದ್ಯನ ಸರ್ವ ನಿರ್ದೇಶನಗಳನ್ನೂ ಹೃದಯದಲ್ಲಿ ಸರಿಯಾಗಿ ಜೋಡಿಸಿಕೊಂಡು ಎಲ್ಲಾ ಮಾರ್ಗಗಳಿಂದಲೂ ದಕ್ಷತೆಯಿಂದ ಪಾಲಿಸಿದಲ್ಲಿ ರೋಗಿ ಬೇಗ ತೊಂದರೆಯಿಂದ ಪಾರಾಗುತ್ತಾನೆ. ಇಲ್ಲದಿದ್ದರೆ ಎಂತಹ ದಕ್ಷ ವೈದ್ಯನಿದ್ದರೂ ಸಹ ರೋಗಿ ಗುಣವಾಗುವುದು, ರೋಗ ಹೆಚ್ಚಾಗುವುದೂ ಮತ್ತು ರೋಗಿಯ ಅಂತ್ಯವಾಗುವುದೂ ಪರಿಚಾರಕನ ದಕ್ಷತೆಯ ಮೇಲೆ ನಿಂತಿರುತ್ತದೆ.

ಇನ್ನು ಶುಚಿತ್ವ:
  ವೈದ್ಯ ಬಾಹ್ಯದಲ್ಲಿ ಶುಚಿಯಾಗಿರಲೇಬೇಕು ಸರಿ, ಆದರೆ ಮುಖ್ಯವಾಗಿ ಆಂತರಿಕ ಶುಚಿತ್ವ ಇರಬೇಕು ಅಂದರೆ, ಚಿಕಿತ್ಸೆ ಮಾಡುವ ಮೊದಲೇ ಈ ಕಾರಣದಿಂದ ಬಂದಿದೆ, ಈ ಕಾರಣವನ್ನು ತ್ಯಜಿಸು ಎಂದು ರೋಗಿಗೆ ತಿಳಿಸಿ ಆತ ಮತ್ತೆ ಮತ್ತೆ ಆಸ್ಪತ್ರೆಗಳಿಗೆ ಅಲೆದಾಡದಂತೆ ಮಾಡಿದರೆ ವೈದ್ಯ ಆಂತರಿಕ ಶುಚಿತ್ವದಿಂದ ಕೂಡಿದ್ದಾನೆ ಎನ್ನಬಹುದು.

  ಪರಿಚಾರಕನಲ್ಲಿ ಬಾಹ್ಯ ಶುಚಿತ್ವ ಬೇಕೇ ಬೇಕು, ಇದನ್ನು ಕಡ್ಡಾಯಗೊಳಿಸಲು ಶುಚಿತ್ವವನ್ನು ಹೇಳಿದ್ದಾರೆ. ಪರಿಚಾರಕರ ಆಂತರಿಕ ಶುಚಿತ್ವಕ್ಕೆ ಅತ್ಯಂತ ಶ್ರೇಷ್ಠ ಪದವನ್ನೇ ಬಳಸಿದ್ದಾರೆ ಅದೇ 'ಅನುರಕ್ತ' ಅಂದರೆ ರೋಗಿಗೆ ಆದ ತೊಂದರೆ ನನಗೇ ಆಗಿದೆ ಎಂದು ಭಾವಿಸುವುದು ಎಂದರ್ಥ. ಇದು ಪ್ರತ್ಯೇಕ ಭಾವಿಸುವುದರ ಅಗತ್ಯ ಹೊಂದಿಲ್ಲ, ತನ್ನ ಮಗುವಿಗೆ ಆಗುವ ಎಲ್ಲಾ ತೊಂದರೆಗೆ ತಾಯಿ ಅನುರಕ್ತಳಾಗಿ ಇರುತ್ತಾಳೆ, ಮಗುವಿಗೆ ಆಗುವ ಸಣ್ಣ ತೊಂದರೆಯೂ ಅವಳ ಅನುಭವಕ್ಕೆ ಬರುತ್ತದೆ, ಅದನ್ನು ಎಚ್ಚರದಿಂದ ಗಮನಿಸುವ ಅಗತ್ಯ ಇಲ್ಲ, ಏಕೆಂದರೆ ಅನುರಕ್ತಗುಣ(ತನ್ನದೇ ರಕ್ತ ಅಲ್ಲಿ ಇಲ್ಲಿ ಇದೆ ಎಂಬ ತಾದಾತ್ಮ್ಯ ಭಾವ) ಅದನ್ನು ಮಾಡಿಸುತ್ತದೆ. ಇದೇ ಆಂತರಿಕ ಶುಚಿತ್ವದ ಮೇರು ಲಕ್ಷಣವಾಗಿದೆ.

  ದುರದೃಷ್ಟವಶಾತ್ ಇಂದಿನ ತಾಯಿಗೆ ತನ್ನ ಮಗುವಿನ ಒಳಗೆ, ಹೊರಗೆ ಏನಾಗುತ್ತದೆಂದು ಹೇಳಿದ ಮೇಲೆ ಗಮನಕ್ಕೆ ಬರುತ್ತದೆ, ಕೆಲವರಲ್ಲಿ ಹೇಳಿದ ಮೇಲೂ ಗಮನಕ್ಕೆ ತಂದ ಮೇಲೂ ಮರೆಯುತ್ತದೆ!! ಇದು ನಾನೆಂಬ ನಾನುವಿನಲ್ಲಿ ಸಿಕ್ಕಿಹಾಕಿಕೊಂಡ ದುಷ್ಪರಿಣಾಮ. ಇಲ್ಲಿ ಕೇವಲ ತಾಯಿ ಮಗು ಎಂದಲ್ಲ 'ರೋಗಿ ಮಗುವಾದರೆ-ಪರಿಚಾರಕ ತಾಯಿ ಹೃದಯ ಹೊಂದಿರಬೇಕು' ಎಂಬುದು ನಿಜವಾದ ಅರ್ಥ.
•••••••••••••••••••••••••••••••••••••••••••••
  ಆಹಾರ ವಿಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ
•••••••••••••••••••••••••••••••••••••••••••••
  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.

  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:
https://t.me/hospitalfreelife_kan

        🙏🏼  ಧನ್ಯವಾದಗಳು  🙏🏼
•••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು