ಮಕ್ಕಳ ದೃಷ್ಟಿ ದೋಷ ಭಾಗ-1

👀    ಮಕ್ಕಳ ದೃಷ್ಟಿದೋಷ ಭಾಗ-1     👀
•••••••••••••••••••••••••••••••••••••••••••••• 
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
 ಸಂಚಿಕೆ: 735
ದಿನಾಂಕ 13.05.2023
••••••••••••••••••••••••••••••••••••••••••••••
  ಮಕ್ಕಳ ದೃಷ್ಟಿದೋಷ ಇಂದು ಸಾಮಾನ್ಯ ಸಂಗತಿಯಾಗಿ ಕಾಣಸಿಗುತ್ತಿದೆ. ಬಹುತೇಕ ಮಕ್ಕಳ ಕನ್ನಡಕಗಳು ದಪ್ಪನಾದ ಮಸೂರಗಳನ್ನು ಹೊಂದಿವೆ. ಆಯುರ್ವೇದ ಚಿಕಿತ್ಸೆಯಿಂದ ಅವುಗಳಿಂದ ಮಕ್ಕಳನ್ನು ಹೊರತರುತ್ತಿದ್ದೇವೆ. ಆ ಕುರಿತ ಸಣ್ಣ ಪರಿಚಯ...

  ಐದು ಇಂದ್ರಿಯಗಳಲ್ಲಿ ಕಣ್ಣು ವಿಶೇಷ ಜ್ಞಾನೇಂದ್ರಿಯವಾಗಿದೆ, ಅದು ತನ್ನ ವಿಷಯವಾದ ರೂಪವನ್ನು ತನಗೆ ತಲುಪಿದ ಮೇಲೆ ಅರಿಯುವುದಕ್ಕಿಂತ, ದೂರದಿಂದಲೇ ಅದನ್ನು ಅರಿಯುತ್ತದೆ. ದೃಶ್ಯದ ರೂಪ, ಗಾತ್ರ, ಬಣ್ಣ, ತೂಕ ಇತ್ಯಾದಿಗಳನ್ನು ಅಂದಾಜಿಸಿ ಅದನ್ನು ಅರಿಯುತ್ತದೆ.

  ಅದೇ ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳು ತಮ್ಮ ತಮ್ಮ ವಿಷಯಗಳು ಹತ್ತಿರ ಬಂದು ತಲುಪಿದ ಮೇಲಷ್ಟೇ ಅದರ ಸ್ವರೂಪವನ್ನು ಅರಿಯುತ್ತವೆ. ಉದಾ: ಕಿವಿಗೆ ಶಬ್ದ ತಲುಪಿದ ಮೇಲೆ, ಚರ್ಮಕ್ಕೆ ಸ್ಪರ್ಶವಸ್ತು ತಲುಪಿದ ಮೇಲೆ, ನಾಲಿಗೆಗೆ ರುಚಿ ತಲುಪಿದ ನಂತರ ಅದನ್ನು ತಿಳಿದುಕೊಳ್ಳುತ್ತವೆ. ಅದೇ ಕಣ್ಣು ತನ್ನ ವಿಷಯವನ್ನು ಬಹು ದೂರದಿಂದಲೇ ಅರಿಯುತ್ತದೆ!

  ಇದಕ್ಕೆ ಕಾರಣವೇ ಅದರೊಳಗಿನ 'ಬೆಳಕು'.

  ಹೊರಗಿನ ಬೆಳಕಿನೊಂದಿಗೆ ಕಣ್ಣೊಳಗಿನ ಬೆಳಕು ಸ್ಪರ್ಧಿಸಿ ಹೊಂದಾಣಿಕೆ ಮಾಡಿಕೊಂಡು, ಜ್ಞಾನಕ್ಕೆ ದಾರಿಯಾಗುತ್ತದೆ... 🤔

  ಕತ್ತಲಿನಲ್ಲಿ, ಕಣ್ಣಗಲಿಸಿ ನೋಡಲು ಕಾರಣ ಏನೆಂದರೆ, ಹೊರಗಿನ ಮಂದ ಬೆಳಕು ಸಾಲದೇ ಕಣ್ಣೊಳಗಿನ ಬೆಳಕು ಹೊರಬಂದು ವಸ್ತುಗಳ ಮೇಲೆ ಬೀಳುತ್ತದೆ, ಆಗ ಅದನ್ನು ಅಂದಾಜು ಮಾಡುತ್ತದೆ ಕಣ್ಣು. ಕೆಲ ಮಹಾತ್ಮರು, ಮಹಾನ್ ತೇಜಸ್ವಿಗಳು, ಕತ್ತಲಿನಲ್ಲಿ ಸ್ಪಷ್ಟವಾಗಿ ನೋಡುತ್ತಾರೆ, ಇದಕ್ಕೆ ಕಾರಣ ನೇತ್ರಗಳಲ್ಲಿನ ಬೆಳಕು! ಇದನ್ನು 'ತೇಜಸ್ಸು' ಎಂತಲೂ ಕರೆಯುತ್ತಾರೆ.

  ಒಳಗೆ ತೇಜಸ್ಸು ಇರುವುದರಿಂದಲೇ ನೇತ್ರವು ವಸ್ತುಗಳನ್ನು ನೋಡುತ್ತದೆ. ತೇಜಸ್ಸು ಇರುವುದನ್ನು ಅರ್ಥಮಾಡಿಕೊಳ್ಳಲು, ಯಾವುದೇ ಪ್ರಾಣಿಯ ಶವದ ಕಣ್ಣನ್ನು ನೋಡಿದರೆ ಅಲ್ಲಿ ತೇಜಸ್ಸಿನ ಅಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.

  ಹೀಗೆ ನೇತ್ರಗೋಲಕದ ಒಳಗಿನ ತೇಜಸ್ಸು ದೃಷ್ಟಿಯ ಸಾಮರ್ಥ್ಯವನ್ನು ಹೇಳುತ್ತದೆ.

  ಆಯುರ್ವೇದ ಆಚಾರ್ಯರು ಹೇಳುತ್ತಾರೆ -- ಚಕ್ಷುರೇಂದ್ರಿಯವು ತೇಜಸ್ಸಿನ ಭಾಗವಾಗಿದ್ದು ಅದಕ್ಕೆ ಪಿತ್ತದೋಷದಿಂದ ರೋಗ ಬರುವುದು ಕಡಿಮೆ, ನೇತ್ರವು ಭಯಪಡಬೇಕಾದುದು ಕಫದೋಷಕ್ಕೆ, ಏಕೆಂದರೆ ಒಮ್ಮೆ ನೇತ್ರಕ್ಕೆ ಕಫ ಆವರಿಸಿದರೆ ಅದು ಚಿಕಿತ್ಸೆಗೆ ಕಷ್ಟ ಅಂದರೆ, ದೃಷ್ಟಿ ಕ್ರಿಯೆಗೆ ವ್ಯತಿರಿಕ್ತವಾಗಿ ವರ್ತಿಸುತ್ತದೆ.

  ಈ ಶರೀರದಲ್ಲಿ, ತೇಜಸ್ಸಿಗೆ ಮೂಲಾಧಾರವಾಗಿ ಇರುವುದು 'ಸ್ನೇಹ' ಅಥವಾ ಶುದ್ಧ ಜಿಡ್ಡು, ಆದರೆ ಕಫ ಎಂಬುದು ಅತ್ಯಂತ ಅಶುದ್ಧ ಜಿಡ್ಡು, ಅದರಲ್ಲಿ ಬೆಂಕಿಯನ್ನು ಅಥವಾ ಬೆಳಕನ್ನು ಹಿಡಿದಿಡುವ ಸಾಮರ್ಥ್ಯ ಅತ್ಯಂತ ಕಡಿಮೆ. ಎಣ್ಣೆಯು ಬೆಂಕಿಯನ್ನು(ತೇಜಸ್ಸನ್ನು) ಹಿಡಿದಿಡುತ್ತದೆ, ಅದೇ ನೀರು ಅಥವಾ ಐಸ್‌ಗಡ್ಡೆ ಬೆಂಕಿಯನ್ನು(ತೇಜಸ್ಸನ್ನು) ಹಿಡಿದಿಡಲಾರದು. ಹಾಗಾಗಿ ಶರೀರದ ಕಫವು ಉಳಿದ ನಾಲ್ಕು ಇಂದ್ರಿಯಗಳಿಗೆ ಸಹಾಯಕವಾಗಿ ಶಕ್ತಿಯನ್ನು ಪೂರೈಸಿದರೂ ಸಹ ನೇತ್ರೇಂದ್ರಿಯದ ವಿಶಿಷ್ಟ ಕೆಲಸಕ್ಕೆ ಅದು ಶಕ್ತಿಯನ್ನು ಒದಗಿಸಲಾರದು, ಹಾಗಾಗಿ 'ಅಭಿಷ್ಯಂದ್ಯ' ಎಂಬ ದೃಷ್ಟಿದೋಷ ಮನುಷ್ಯರನ್ನು ಕಾಡುತ್ತದೆ.

  ಅಭಿಷ್ಯಂದ್ಯ ಅಥವಾ ನೇತ್ರಾಭಿಷ್ಯಂದ್ಯವು ಇಂದು ಅನೇಕ ಮಕ್ಕಳನ್ನು ಕಾಡುತ್ತಿದೆ. ಇದನ್ನು ಸರಿಪಡಿಸಲು ದಪ್ಪನಾದ ಮಸೂರಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬಳಸಲಾಗುತ್ತಿದೆ. ವಾಸ್ತವದಲ್ಲಿ ಅದನ್ನು ಚಿಕಿತ್ಸೆ ಮಾಡಬಹುದು... 🤔

....... ಮುಂದುವರೆಯುವುದು...

     🙏🏼  ಧನ್ಯವಾದಗಳು  🙏🏼
••••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು